ತೊರವೆ -
ಬಿಜಾಪುರ ಜಿಲ್ಲೆಯಲ್ಲಿರುವ ಒಂದು ಗ್ರಾಮ.  ಬಿಜಾಪುರ ಪಟ್ಟಣದ ಪಶ್ವಿಮಕ್ಕೆ 6.4 ಕಿ.ಮೀ. (4 ಮೈ.) ದೂರದಲ್ಲಿದೆ.  ಎರಡನೆಯ ಇಬ್ರಾಹಿಮ್ ಆದಿಲ್‍ಶಾಹನ ಕಾಲದಲ್ಲಿ ಈ ಗ್ರಾಮ ಪ್ರಾಮುಖ್ಯಗಳಿಸಿತು.  ಅವನು ಇಲ್ಲಿ ಅನೇಕ ಭವ್ಯಭವನಗಳನ್ನು ಕಟ್ಟಿಸಿದ.  ಈಗಲೂ ಅವುಗಳ ಅವಶೇಷಗಳಿವೆ.  ಈ ಗ್ರಾಮದಿಂದ ಬಿಜಾಪುರ ಪಟ್ಟಣದ ದ್ವಾರಕ್ಕೆ ಇರುವ ರಸ್ತೆ ರಾಜಮಾರ್ಗವಾಗಿತ್ತೆಂಬುದು ಅದರ ಎರಡೂ ಬದಿಗಳಲ್ಲಿರುವ ಸಾಲು ಮಣ್ಣುಗುಡ್ಡೆಯಿಂದ ಗೊತ್ತಾಗುತ್ತದೆ.  ತೊರವೆಯಲ್ಲಿ ಹಲವು ದೇವಾಲಯಗಳೂ ಮಸೀದಿಗಳೂ ಇವೆ.

ದೇವಾಲಯಗಳಲ್ಲಿ ಪ್ರಧಾನವಾದ್ದು ನರಸಿಂಹನದು.  ಇದು ಭೂಮಿಯ ಕೆಳಗೆ ಗುಹೆಯಲ್ಲಿದೆ.  ಅದರ ಒಳಗೆ ಇಳಿದು, ಎರಡು ತಿರುವು ಕತ್ತಲಲ್ಲೇ ಸುತ್ತಿಕೊಂಡು ಗೋಡೆಗಳ ಕೈ ಆಸರೆಯಿಂದ ಹೋಗಬೇಕಾಗುತ್ತಿತ್ತು. ಈಗ ಗುಹೆಯಲ್ಲಿ ವಿದ್ಯುದ್ದೀಪದ ವ್ಯವಸ್ಥೆಯಾಗಿದೆ.  ದೇವಾಲಯದಲ್ಲಿ ನರಸಿಂಹನ ಸುಂದರ ಶಾಲಗ್ರಾಮ ಶಿಲಾವಿಗ್ರಹವಿದೆ.  ಇದರ ಮೇಲೆ ಸುತ್ತಲೂ ಪ್ರಭಾವಳಿಯಲ್ಲಿ ದಶಾವತಾರಗಳೂ ಕೆಳಬದಿಯಲ್ಲಿ ಭಕ್ತ ಪ್ರಹ್ಲಾದನ ಮೂರ್ತಿಯೂ ಇವೆ.  ಮೂರ್ತಿಭಂಜಕರಿಗೆ ಈ ದೇವಾಲಯದ ಸುಳಿವು ಸಿಗದೇ ಇದು ಭದ್ರವಾಗಿ ಉಳಿದುಕೊಂಡಿತು. ತೊರವೆ ಒಂದು ಯಾತ್ರಾಸ್ಥಳ.  ದೇವಾಲಯದ ವರೆಗೂ ಸಣ್ಣ ವಾಹನಗಳು ಹೋಗಿಬರಬಹುದು.

ಕುಮಾರ ವಾಲ್ಮೀಕಿ ಎಂದು ಪ್ರಸಿದ್ಧನಾದ ನರಹರಿ ಕವಿ (1500) ತನ್ನ ಕನ್ನಡ ರಾಮಾಯಣ ಕಾವ್ಯವನ್ನು ರಚಿಸಿದ್ದು ಈ ದೇವಾಲಯದಲ್ಲೇ.  ತೊರವೆ ರಾಮಾಯಣ ಎಂದು ಪ್ರಸಿದ್ಧವಾಗಿರುವ ಈ ಕೃತಿ ವಾಲ್ಮೀಕಿ ರಾಮಾಯಣದ ಸಂಗ್ರಹಾನುವಾದ.

ತೊರವೆ ಗ್ರಾಮದಲ್ಲಿ 400 ಗಜ ಚಚ್ಚೌಕದ ನರಸಿಂಹತೀರ್ಥವೆಂಬ ಒಂದು ಹೊಂಡ ಇದೆ.  ಈ ಗ್ರಾಮದಲ್ಲಿರುವ 40 ಹಳೆಯ ಬಾವಿಗಳಲ್ಲಿ ಕೆಲವು ಈಗಲೂ ಬಳಕೆಗೆ ಯೋಗ್ಯವಾಗಿವೆ.  ಇಬ್ರಾಹಿಮ್ ಆದಿಲ್ ಶಾಹನ ಕಾಲದಲ್ಲಿ ಬಿಜಾಪುರ ನಗರದ ನೀರು ಪೂರೈಕೆಗೆ ಉಪಯೋಗಿಸಿಕೊಳ್ಳುತ್ತಿದ್ದ ಕೆಲವು ಚಿಲುಮೆಗಳೂ ಇವೆ.
(ಕೆಎ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ